ಪಲಾಯನ ಸಾಹಿತ್ಯ -
ಕಾಲ್ಪನಿಕ ಪ್ರಪಂಚವೊಂದನ್ನು ನಿರ್ಮಿಸಿ ಅಲ್ಲಿ ಓದುಗರು ಆರಾಮವಾಗಿ ವಿಹರಿಸುವಂತೆ ಮಾಡುವ ಲಘು ಸಾಹಿತ್ಯಕ್ಕೆ ಈ ಹೆಸರಿದೆ. (ಎಸ್ಕೇಪಿಸ್ಟ್ ಲಿಟರೇಚರ್).

19ನೆಯ ಶತಮಾನದ ರೊಮ್ಯಾಂಟಿಕ್ ಕವಿಗಳು ತೀವ್ರ ಸ್ವಾಭಿಮಾನದವರು ; ತಮ್ಮ ವೈಯಕ್ತಿಕ ಕಷ್ಟನಿಷ್ಠುರಗಳನ್ನು ಬಹಿರಂಗವಾಗಿ ತೋಡಿಕೊಂಡು ಕನಿಕರ ಸಂಪಾದಿಸುವ ವರ್ತನೆ ಅವರದ್ದು ; ಬದುಕಿನ ಕಟ್ಟುಗ್ರ ಹಿಡಿತದಿಂದ ತಪ್ಪಿಸಿಕೊಂಡು ಯಾವುದೇ ಸ್ವಪ್ನರಾಜ್ಯಕ್ಕೆ ಓಡಿಹೋಗುವುದೇ ಅದರ ಹೆಬ್ಬಯಕೆ- ಈ ತಾತ್ಪರ್ಯದ ಆರೋಪಣೆಯನ್ನು 20ನೆಯ ಶತಮಾನದವರು ಪ್ರಚಾರಕ್ಕೆ ತಂದರು. ಅದು ರೊಮ್ಯಾಂಟಿಕ್ ಪಂಥದ ನಿಷ್ಪಕ್ಷಪಾತ ವಿಮರ್ಶೆಯೆಂದು ಕೆಲವು ವಿಕಟಬುದ್ದಿಗಳು ಹೇಳಿದರೇ ವಿನಾ ಯೋಚನಾಪರರಾರು ಅದನ್ನು ಒಪ್ಪಲಿಲ್ಲ. ಆದರೂ ಅದರಿಂದ ಒಂದು ಪ್ರಯೋಜನ ಉಂಟಾಯಿತು. ಬಹು ಕಾಲದಿಂದ ನಡೆದುಬಂದಿದ್ದರೂ ತನ್ನದೇ ಆದ ಹೆಸರೊಂದನ್ನು ಗಳಿಸದೇ ಇದ್ದ ಒಂದು ಸಾಹಿತ್ಯ ಪ್ರಕಾರಕ್ಕೆ ಪಲಾಯನ ಸಾಹಿತ್ಯವೆಂಬ ಒಂದು ಹೆಸರು ಬಂತು. ಪತ್ತೆದಾರಿ ಕಾದಂಬರಿ, ಅದ್ಭುತ ಸಾಹಸದ ಕಟ್ಟುಕಥೆ. ಇಲ್ಲದ ಸಲ್ಲದ ರಾಜ್ಯಗಳ ಚರಿತ್ರೆ, ಸಂಗೀತ ಮಿಶ್ರಿತ ಹರ್ಷನಾಟಕ, ಸಿನಿಮಾ ಕಥೆ ಮುಂತಾದ ಹಗುರ ಲೇಖನಗಳೆಲ್ಲ ಆ ಗುಂಪಿಗೆ ಸೇರಿದುವು. ಅವುಗಳಲ್ಲಿ ಸುಸಂಗತ ವಸ್ತುಸಂವಿಧಾನ, ಸಹಜ ಜೀವಂತ ಪಾತ್ರಗಳು, ನಿರಾಡಂಬರ ಶೈಲಿ ಯಾವುದನ್ನೂ ಓದುಗರು ನಿರೀಕ್ಷಿಸಬಾರದು, ಪಾತ್ರಗಳೆಲ್ಲ. ಲೇಖಕನ ಇಚ್ಛೆಯಂತೆ ಓಡಿಯಾಡುವ ಗೊಂಬೆಗಳು ; ಘಟನೆಗಳು ಹೇಗೆ ಹೇಗೊ ಒದಗುತ್ತವೆ. ಎಲ್ಲೆಲ್ಲೂ ಡಂಭದ ಅಸಂಬದ್ದತೆ, ಅತ್ಯುಕ್ತಿಯ ಕೃತಕತೆ. ಅಂತೂ ಬಾಳಿನಿಂದಲೂ ಕಸಬಿನಿಂದಲೊ ದಣಿದು ನೊಂದಿರುವ ಓದುಗರು ಚಿತ್ತವನ್ನು ತುಸುಹೊತ್ತು ಬೇರೆ ಕಡೆಗೆ ತಿರುಗಿಸಿ, ಬೇಜಾರನ್ನು ಹೋಗಲಾಡಿಸುವುದಕ್ಕೆ ಇಂಥ ಪುಸ್ತಕಗಳ ಅಗತ್ಯವಿದೆ. ಇಂಥ ಪುಸ್ತಕಗಳೇ ಇಂದಿಗೂ ಬಹು ಜನಪ್ರಿಯವಾಗಿವೆ.

ಕೈಕೆಲಸವಾಗಲಿ, ಮಾನಸಿಕ ವ್ಯವಸಾಯವಾಗಲಿ ಹೆಚ್ಚಾದಾಗ ಯಾರಿಗಾದರೂ ವಿಶ್ರಾಂತಿಯೊ ವಿನೋದವೊ ಅವಶ್ಯಕ ಎನಿಸುವುದು ಸಹಜ. ಹಾಗೆ ವಿಶ್ರಾಂತಿಯನ್ನೋ	ವಿನೋದವನ್ನೋ ಕೊಡುವ ಅನೇಕ ಹವ್ಯಾಸಗಳಿವೆ. ಆದರೆ ಅಂಥವುಗಳಿಂದ ಹಣ ದುವ್ರ್ಯಯವಾಗುತ್ತದೆ. ವಿನೋದ ವಿಶ್ರಾಂತಿಗಳಿಗೆ ಬದಲಾಗಿ ಆಲಸ್ಯ ಸುಸ್ತು ಮೈನೋಯುತ್ತವೆ. ಇದಕ್ಕೆ ಬದಲು ಶುದ್ಧ ಸಂತೋಷವನ್ನು ಕೊಡುವ ಲಘು ಸಾಹಿತ್ಯವನ್ನು ಓದುವುದು ಒಳ್ಳೆಯದು.
ಆದರೆ ಅಂಥ ಸಾಹಿತ್ಯ ಎಷ್ಟೇ ರೋಚಕವಾಗಿದ್ದರೂ ಮಾನವರಲ್ಲಿನ ಕಾಮತೃಷೆಯನ್ನು ಪ್ರಚೋದಿಸುವಂಥದಾಗಿರಬಾರದು ; ಕೊಲೆ ಸುಲಿಗೆ ದರೋಡೆಗಳ ಬಗ್ಗೆ ಅವನಿಗಿರುವ ಭಯಭೀತಿಗಳನ್ನು ತೊಡೆದುಹಾಕುವಂಥವಾಗಿರಬಾರದು ; ಸದಭಿರುಚಿಗಳನ್ನು ಮಲಿನ ಮಾಡುವಂತಿರಬಾರದು. ಅದರೆ ಇಂದು ಪಲಾಯನ ಸಾಹಿತ್ಯದ ಹೆಸರಿನಲ್ಲಿ ಬರುತ್ತಿರುವ ಪುಸ್ತಕಗಳು ಈ ಒಂದು ಉನ್ನತ ಧ್ಯೇಯವನ್ನು ಪೋಷಿಸುತ್ತಿಲ್ಲವೆಂಬ ಮಾತೂ ನಿಜ. ಅನೇಕ ಕಥೆ ಕಾದಂಬರಿಗಳು, ಆತ್ಮಕಥೆಗಳು, ದೂರದರ್ಶನದ ಹಲವಾರು ನಾಟಕಗಳು, ಚಲನಚಿತ್ರಗಳು ಮಾನವನ ಹೀನ ಪ್ರವೃತ್ತಿಗಳನ್ನು ಪ್ರಚೋದಿಸುವಂತಿವೆ.

ಪಲಾಯನವೆಂದರೆ ಜೀವನದ ಕಠೋರ ಸತ್ಯಗಳನ್ನು ಬಿಟ್ಟೋಡುವುದೆಂದಲ್ಲ ಅದು ಹೇಡಿಗಳಿಗೆ ಸರಿ. ಪಲಾಯನವೆಂದರೆ ಶ್ರಮ ಪರಿಹಾರ-ಕೆಲಕಾಲ ಮಾತ್ರ. ಪಲಾಯನವೆಂದರೆ ತತ್ಕಾಲಕ್ಕೆ ಬಯಸುವ ವಿನೋದ, ವಿಶ್ರಾಂತಿ, ಅಷ್ಟೆ.       (ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ